Friday 8 April 2016

ಅಪ್ಪ ಅಮರ !


ಅಪ್ಪ ಮಕ್ಕಳ  ನಡುವಿನ ಅನುಭಂದ  ಅನನ್ಯವಾದದ್ದು. ಅಕ್ಷರಗಳಿಗೆ ನಿಲುಕದ ಭಾವ ಬಾಂದಳದ ನಕ್ಷತ್ರದಂತಹದ್ದು. ಮಕ್ಕಳು ಹುಟ್ಟಿದಾಗಿಂದ ಬೆಳೆದು ದೊಡ್ಡವನರಾಗಿ ಮತ್ತೆ ಅವರೂ ಅಪ್ಪನಾಗುವ ಸಂಬ್ರಮ ನೊಡಿ ಸಂತೋಷ ಪಡುವ ಅಪ್ಪ ತನ್ನ ಕೊನೆಯ ದಿನಗಳನ್ನು ಮಕ್ಕಳ ಮತ್ತು ಮೊಮ್ಮಕ್ಕಳ ಜೊತೆ  ಕಾಲ ಕಳೆಯುವ ಮುನ್ನವೇ ಕಾಲವಾದ ದಿನಕ್ಕಿಂತ ದುಖದ, ಎದೆ ಬಿರಿಯುವ, ಮನಸು ಭಾರವಾಗುವ, ಹೃದಯ ಹಿಂಜುವ ಘೋರ ದಿನ ಮತ್ತೊಂದಿರರದು .

ಯುಗಾದಿಯ ಬೇವು ಬೆಲ್ಲದ ಮಿಶ್ರಣ ಸವಿಯುವ ದಿನ ಬರಿ ಬೇವಿನ ಕಹಿಯನ್ನೇ ಕೊಟ್ಟು ಅಪ್ಪ ನಮ್ಮನೆಲ್ಲ ಬಿಟ್ಟು ಹೋದ ನೋವು, ಮತ್ತೆ ಬರುವ ಯಾವ ಯುಗಾದಿಯು ನನ್ನ ಜೀವನದಲ್ಲಿ ಸಿಹಿಯನ್ನು  ನೆನಪಿಸಲಾರವು.

೮-೪-೨೦೧೬ ಇದು 'ಅಪ್ಪನ ದಿನ' ಇಂದು ಅಪ್ಪ ನಮ್ಮನೆಲ್ಲ ಅಗಲಿ ಬಾರದ ಲೋಕಕ್ಕೆ ಒಂದು ಕೊನೆಯ ಮಾತು ಹೇಳಲಾಗದೆ ಬಿಕ್ಕಳಿಸುತ್ತ ನಿಟ್ಟುಸಿರಿನ ನಡುವೆ ಉಸಿರು ನಿಲ್ಲಿಸಿದರು.  ಅವರು ಇರುವಾಗ ಎಂದೂ ತನ್ನ ಇಷ್ಟ - ಕಷ್ಟ ಹೇಳಿಕೊಂಡವರಲ್ಲ, ಬದಲಾಗಿ ಮಕ್ಕಳ ಬಗ್ಗೆ ಮರುಗಿದವರು. ಅವರ ಕಷ್ಟ  ಕಂಡು ಕೊರಗಿದವರು. ಇನ್ನು ಯಾರು ಅಪ್ಪನ ಜಾಗ ತುಂಬಿಯಾರು? ಅಪ್ಪನಿಗೆ ಅಪ್ಪನೇ ಸಾಟಿ, ಅಪ್ಪನಿಗೆ 'ಅಲ್ಟರ್ನೆಟ್'  ಎಲ್ಲಿದೆ.. ಎಲ್ಲೂ ಎಂದೂ ಉತ್ತರವಿರದ ಪ್ರಶ್ನೆ (?)
ಅಪ್ಪ ಇಂದು ಮೌನ ವೃತ, ಮುಂದಿನ ಯುಗಾದಿಗಳು ಕೇವಲ ಕಹಿ ಮಾತ್ರ.
ಅಪ್ಪನಿಗಾಗಿ ಮಾಡಬೇಕೆಂದುಕೊಂಡ ಎಲ್ಲ ಕೆಲಸಗಳು ಸಮಾದಿ.
ಇದು ನನಗೆ ದಕ್ಕಿದ ಯುಗಾದಿ.
ಆ ವಿಧಿಯ ಎದುರಿಗೆ ನಿಂತು ಹೀಗ್ಯಾಕೆ ಮಾಡಿದೆ ?
ಎಂದು ಕೇಳುವ ಧೈರ್ಯ ಯಾರಿಗಿದೆ?

ಅಪ್ಪ ಬೆನ್ನಿಗಿದ್ದ ನಾನು ಮುಂದೆ ಹೋಗುತಿದ್ದೆ, ಇಂದು ನಮ್ಮನ್ನೆಲ್ಲ ಬಿಟ್ಟು ಹಿಂದೆ ಉಳಿದುಬಿಟ್ಟ.
ಅಪ್ಪನೇನೋ ತನ್ನ ಬಕುಕಿನ ದಡ ತಲುಪಿಬಿಟ್ಟ.
ಆದರೆ ಅಪ್ಪ ಬಿಟ್ಟುಹೋದ ಮನೆಯವರನ್ನು ಹೊತ್ತು ನಾನು ಹೊರಡಲೇಬೇಕು ಬದುಕಿನ ನಾವೆಯಲಿ ನಾಳೆಯ ತುತ್ತಿನ ಶೋಧದಲಿ.
'ಅಪ್ಪ' ಇನ್ನೇನಿದ್ದರೂ ನನ್ನ ಸ್ಮುತಿಪಟಲದ ಚಿತ್ರ; ಎದೆ ಭಾರವಾದಾಗ ಜಿನುಗುವ ಕಣ್ಣಂಚಿನ ಹನಿ; ನೆನಪು ಕಾಡಿದಾಗ ಸದಾ ಕಣ್ಣಾಲೆಯಲಿ ತೇಲುತ್ತ ಸಾಗುವ ನೆನಪಿನ ದೋಣಿ.
ನಿನ್ನ ತ್ಯಾಗ, ಶಾಂತ ಗುಣ ನನಗೆ ಆದರ್ಶ ಮತ್ತು ಸ್ಪೂರ್ತಿ, ಎಂದೆಂದಿಗೂ ಅಪ್ಪ
ನನ್ನ ಬದುಕಿನ ದಾರಿ ದೀಪ.

ಎಲ್ಲೋ ಓದಿದ "ಅಪ್ಪನೆಂಬ ಅದ್ಭುತ" ಕವಿತೆಯೊಂದು ನೆನಪಾಗುತಿದೆ. ಯಾರು ಬರೆದ ಕವಿತೆಯೋ ಗೊತ್ತಿಲ್ಲ...ಆ ಕವಿಯ ಕ್ರಪೆ ಕೊರುತ್ರ ಅಪ್ಪನ ಬಗ್ಗೆ ಬರೆದ ಭಾವಲಹರಿ ನನ್ನ ಭಾವಕ್ಕೂ  ತುಂಬಾ ಹತ್ತಿರ ಎನ್ನುವ ಕಾರಣಕ್ಕೆ ಇಲ್ಲಿ ಹಂಚಿಕೊಳ್ಳುತ್ತಿದ್ದೆನೆ ಅಪ್ಪನ ನೆನಪಿನಲ್ಲಿ.

ಅದಕ್ಕೂ ಮುನ್ನ ಅಪ್ಪನಿಗೆ ಹೇಳದೆ ಉಳಿದ  ನಾಲ್ಕು ಮಾತುಗಳು ಹೇಳಬೆಕೆನಿಸುತಿದೆ .
"ಅಪ್ಪಾ ಯು ಆರ್ ಗ್ರೇಟ್
ಬಟ್ ಐಯಮ್ ಟೂ ಲೇಟ್,
ಅಪ್ಪಾ ಐಯಮ್ ಸೊ ಸಾರೀ
ಪ್ಲೀಸ್ ಫಾರ್ಗಿವ್ ಮಿ ಕೊನೆಯ ಬಾರಿ"

ಅಪ್ಪಾ ಈ ತಪ್ಪೋಪಿಕೆ ಒಪ್ಪಿಸಿಕೊ.
ಇದೆಲ್ಲವೂ ನಾನು ಮಾಡಿದ ತಪ್ಪಿಗೆ ಮತ್ತೆ ನಿನಗಾಗಿ ಮಾಡದೆ ಉಳಿದ ಕೆಲಸಗಳಿಗೆ.
ಮತ್ತೆ ಕ್ಷಮಿಸು, ಮನ್ನಿಸು ಹಾಗೆ ಎಂದಿನಂತೆ
ಹರಸು ಈ ನಿನ್ನ ಮಗನಿಗೆ.
......................................................................
"ಅಪ್ಪನೆಂಬ ಅದ್ಭುತ"
----------------------------
ಅಮ್ಮನ ಕಂಬನಿ
ಕಂಡಷ್ಟು ನಮಗೆ
ಅಪ್ಪನ ಬೆವರಹನಿ
ಕಾಣುವುದೇ ಇಲ್ಲ..!

ಅಪ್ಪನೆಂದರೆ ನಮ್ಮ
ಮನೆಯ ಕಾಮಧೇನು !
ಬೇಡಿದ್ದೆಲ್ಲ ನೀಡಲೇ
ಬೇಕಾದ ಕಲ್ಪವೃಕ್ಷ !

ಅಪ್ಪ ಅತ್ತಿದ್ದು..
ಕಂಡವರು ಕಡಿಮೆ !
ಅಪ್ಪ ನೋವುಗಳಿಲ್ಲದ
ಸಮಚಿತ್ತ ಸರದಾರ !

ಹಬ್ಬ ಸಂತಸಗಳಲಿ
ರೇಷ್ಮೆಸೀರೆ ಹೊಸಬಟ್ಟೆ
ತೊಡಿಸಿ ಸಂಭ್ರಮಿಸುವ
ಅಪ್ಪನುಡುಗೆ ಗಮನಿಸಿದವರಾರು?!

ಧರೆಯ ನಿತ್ಯ ಪೊರೆವ
ಅಂಬರದಂತೆ ತಂದೆ
ಸತಿಸುತರ ಹಗಲಿರುಳು
ಕಾಯ್ವ ವಾತ್ಸಲ್ಯಧಾರೆ !

ಅಮ್ಮನ ಮಡಿಲಿಂದ
ಕೈಹಿಡಿದು ನಮ್ಮನ್ನೆಲ್ಲ
ಹೆಗಲಿಗೇರಿಸಿ ಲೋಕ
ತೋರಿಸಿದ ಮಾರ್ಗದರ್ಶಕ !

ನೋವು-ಬೇವು ನಿರಾಸೆ
ಸಂಸಾರದೊತ್ತಡಗಳ..
ಹಾಲಾಹಲವನೆಲ್ಲ ನುಂಗಿ
ನಗುವ ನೀಲಕಂಠ !

ಅಮ್ಮನೆಂದರೆ ಮಮತೆ !
ಅಪ್ಪನೆಂದರೆ ಭದ್ರತೆ !
ಸದಾ ಮಡದಿ-ಮಕ್ಕಳ
ಭವಿಷ್ಯಕಾಗಿ
ಮುಡುಪಿಟ್ಟು ಬೆಳಗುವ
ಕರ್ಪೂರದ ಹಣತೆ !

ಹಬ್ಬಕ್ಕೆ  ಹೊಸ ಬಟ್ಟೆ ಕೊಡಿಸಿ
ಸಂಬ್ರಮಿಸುತಿದ್ದ ಅಪ್ಪನ
ಮೈಯ ಮೇಲಿದ್ದ ಹರಿದ ಬನಿಯನ್
ಯಾರಿಗೂ ಕಾಣಲೇಯಿಲ್ಲ!

ಹೊಸ ಚಪ್ಪಲಿ ಶೂ ಹಾಕಿಸಿ
ಶಾಲೆಗೆ ಕಳಿಸುವಾಗ
ಅಪ್ಪನ ಹವಾಯಿ ಚಪ್ಪಲಿ
ಎಂದೋ ಹರಿದು ಹೋದದ್ದು
ಗೊಚರಿಸಲೇ ಇಲ್ಲ!

ಕೂಡಿ ಉಣುವಾಗ ಎಲ್ಲರಿಗೂ ತೃಪ್ತಿಯಾಗಲಿ
ಎಂದು ಅರ್ಧ ಹೊಟ್ಟೆಯಲ್ಲೇ ಕೈತೊಳೆದ
ಅಪ್ಪನ ಹಸಿವು ತಿಳಿಯಲೇ ಇಲ್ಲ!

ಮಗಳು ತವರು ಬಿಡುವಾಗ
ಅಮ್ಮನ ಕಣ್ಣೀರ ಮುಂದೆ
ಅಪ್ಪನ ಗಟ್ಟಿ ಎದೆ ಬಿರಿದು ಮೌನವಾದದ್ದು ಗೊತ್ತಾಗಲೇ ಇಲ್ಲ!

ಅವ್ವನ ಮಮತೆಯ ಒರತೆಯಲಿ
ಅಪ್ಪನ ಬೆವರು ಉಕ್ಕಿದ್ದು
ತಿಳಿಯಲೇ ಇಲ್ಲ
ಎದೆಯಾಳದ ಬಿಗಿತ
ಗೊಚರಿಸಲೇ ಇಲ್ಲ.



2 comments:

  1. ಗೆಳೆಯ, ದುಖಿಸಬೇಡ ತಂದೆಗೆ ಸರಿಸಾಟಿ ಯಾರು ಆಗಲಾರರು. ಅಪ್ಪ ಅಪ್ಪನೆ...
    ನಿನಗೆ ಗೊತ್ತಿದೆಯೆಲ್ಲ ಗೆಳೆಯ, ಹುಟ್ಟು ಸಾವು ನಮ್ಮ ಕೈಯಲಿಲ್ಲ ಎಲ್ಲಾ ವಿಧಿಯಾಟ. ನಿಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ನಿಮಗೆ ಈ ದುಖ ತಡೆದುಕೊಳ್ಳುವ ಶಕ್ತಿ ಕೊಡಲಿ ಏಂದು ಆ ದೇವರಲ್ಲಿ ಪ್ರಾರ್ಥಿಸುತ್ತೆನೆ.

    ReplyDelete
  2. ನನ್ನ ಬದುಕಿನ ನೋವು ನಲಿವಿನ ಎಲ್ಲಾ ಸಂದರ್ಭಗಳಲ್ಲೂ ದಶಕಗಳಿಂದಲೂ ನನ್ನೊಂದಿಗೆ ನಿಮ್ಮಂತ ಸಹೃದಯಿ ಸ್ನೇಹಿತರಿರುವುದರಿಂದಲೆ ಬದುಕು ಸಹ್ಯವಾಗಿರುವುದು. ನಿಮ್ಮ ಪ್ರೀತಿ ಕಾಳಜಿಗಳಿಗೆ ನಾನೆಂದಿಗೂ ಆಭಾರಿ.

    ReplyDelete