Saturday 1 November 2014

‘ನವೆ೦ಬರ್ ಒಂದು, ನಾವೆಲ್ಲರೂ ಒ೦ದು’

 
‘ನವೆ೦ಬರ್ ಒಂದು, ನಾವೆಲ್ಲರೂ ಒ೦ದು’ಎನ್ನುವ ಸ೦ದೇಶ ನೆನಪಿಸುವ ದಿನ. ಕನ್ನಡಿಗರ ಏಕತೆ ಮತ್ತು ಸಮಗ್ರತೆಯ ಸಂಕೇತದ ಸುದಿನ. ಸುದಿನಕ್ಕೆ ಇಂದಿಗೆ ೫೯ (೪೧) ವರ್ಷಗಳು ಸ೦ದಿವೆ. ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕ ಕನ್ನಡಿಗರು ಎಂಬುದು ನಮ್ಮ ಹಿರಿಮೆ; ರಾಜ್ಯದ ಗರಿಮೆ. ಕನ್ನಡವೆಂಬುದು ಬರಿ ಭಾಷೆಯಲ್ಲ, ಕೇವಲ ನಾಡಲ್ಲ, ಕನ್ನಡ ನಮ್ಮ ಭಾವ, ಮನಸು ಮತ್ತು ಸಂಸ್ಕೃತಿ.

ವಿಶ್ವದ ಎಲ್ಲ ಕನ್ನಡದ ಮನಸ್ಸುಗಳಿಗೆ ಹಾಗು ಕನ್ನಡವನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲ ಇತರ ಭಾರತೀಯ ಭಾಷಿಕರಿಗೂ 'ಕರ್ನಾಟಕ ರಾಜ್ಯೋತ್ಸವದ' ಶುಭಾಶಯಗಳು !
ಸಂಧರ್ಭದಲ್ಲಿ ನಾಡಿನ ಕುರಿತಾದ ನಮ್ಮ ಪ್ರಜ್ಞೆಯನ್ನು ಜಾಗ್ರತಗೊಳಿಸುವ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪನವರ ಎರಡು ನಾಡ ಗೀತೆಗಳನ್ನು ಮೆಲುಕು ಹಾಕೋಣ.
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
-
ಕುವೆಂಪು
"ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಮುದ್ದಿನ ಕರು
ಕನ್ನಡತನವೊಂದಿದ್ದರೆ
ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ನೀ ಮುಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪಿಂಪಿನ ಬನವಾಸಿಗೆ ಕರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೊಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಒಂಪುಳಿಹೋಗುವ ಮನ
ಕನ್ನದವೇ ಸತ್ಯ ಕನ್ನದವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ
ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ಮಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ"
-
ಕುವೆಂಪು
****